ಸಿಕಂದರ್ ಆದಿಲ್ ಷಾ - 
	ಆದಿಲ್ ಶಾಹೀ ವಂಶದ ಕೊನೆಯ ಸುಲ್ತಾನ (1672-86). ಎರಡನೆಯ ಅಲಿ ಆದಿಲ್ ಷಾ 1672ರಲ್ಲಿ ನಿಧನವಾದ ಅನಂತರ ಈತ ಪಟ್ಟಕ್ಕೆ ಬಂದ. ಆಗ ಇವನು ಕೇವಲ ನಾಲ್ಕು ವರ್ಷದ ಬಾಲಕ. ಈ ಹೊತ್ತಿಗಾಗಲೇ ದಕ್ಷಿಣದಲ್ಲಿ ಪ್ರಬಲವಾಗಿದ್ದ ದಾಕ್ಷಿಣಾತ್ಯ ಮುಸಲ್ಮಾನರೂ ಅಬಿಸೀನಿಯನ್ನರೂ ಒಂದು ಕಡೆ, ಆಪ್ಘನ್ನರು ಮತ್ತೊಂದು ಕಡೆ ಸುಲ್ತಾನನ ಮೇಲೆ ತಮ್ಮ ಪ್ರಭಾವವನ್ನು ಬೀರಲು ಉದ್ಯುಕ್ತರಾಗಿದ್ದರು. ಈ ಸಂಕಷ್ಟಗಳೊಂದಿಗೆ ಮುಗಲರ ಆಕ್ರಮಣವೂ ಒದಗಿಬಂದಿತ್ತು. ಈ ಸಂದರ್ಭದಲ್ಲಿ ಬಾಲಕ ನಾಗಿದ್ದ ಸುಲ್ತಾನನು ರಾಜ್ಯಾಡಳಿತವನ್ನು ಮಂತ್ರಿಗಳ ವಶಕ್ಕೊಪ್ಪಿಸ ಬೇಕಾಗಿ ಬಂತು.

	ಮೊಗಲರ ಸೇನೆ 1676ರಲ್ಲಿ ಬಹದೂರ್ ಖಾನನ ನೇತೃತ್ವದಲ್ಲಿಯೂ 1679ರಲ್ಲಿ ದಿಲೀರ್ ಖಾನನ ನೇತೃತ್ವದಲ್ಲಿಯೂ 1682ರಲ್ಲಿ ಔರಂಗಜೇಬನ ಮಗ ಆಜಮ್‍ನ ನೇತೃತ್ವದಲ್ಲಿಯೂ ಬಿಜಾಪುರದ ಮೇಲೆ ದಾಳಿ ನಡೆಸಿತು. 1684ರಲ್ಲಿ ಶಿವಾಜಿಯ ಮಗ ಸಾಂಬಾಜಿಯ ವಿರುದ್ಧ ಮೊಗಲರಿಗೆ ಸಹಾಯ ಮಾಡಬೇಕೆಂದು ಆಗ್ರಹ ಪಡಿಸಿದರೂ ಸಿಕಂದರ್ ಈ ಕೋರಿಕೆಯನ್ನು ನಿರಾಕರಿಸಿ ಮರಾಠರೊಂದಿಗೆ ಸಹಕರಿಸುವುದಾಗಿ ನೇರವಾಗಿಯೇ ತಿಳಿಸಿದ. 1685 ಜನವರಿಯ ಹೊತ್ತಿಗೆ ಯುದ್ಧ ಸನ್ನಾಹ ಮಾಡತೊಡಗಿದ. ಇದೇ ಸುಮಾರಿಗೆ ಸಾಂಬಾಜಿಯ ದಿವಾನ ಮೇಲ್‍ಗಿರಿ ಪಂಡಿತನ ನಾಯಕತ್ವದಲ್ಲಿ ಮರಾಠರ ಸೇನಾ ತುಕಡಿಯೊಂದು ಬಿಜಾಪುರವನ್ನು ತಲುಪಿತು. ಗೋಲ್ಕೊಂಡದ ಸುಲ್ತಾನನೂ ಸಿಕಂದರ್‍ಗೆ ಸಹಾಯ ಒದಗಿಸುವುದಾಗಿ ಆಶ್ವಾಸನೆ ನೀಡಿದ. 1685 ಏಪ್ರಿಲ್ ಸುಮಾರಿಗೆ ಮೊಗಲರ ಮತ್ತು ಬಿಜಾಪುರದ ಸುಲ್ತಾನರ ನಡುವಣ ಮಾತುಕತೆಗಳು ಮುರಿದು ಬಿದ್ದುವು. ಮೊಗಲರ ಸೇನೆ ಬಿಜಾಪುರವನ್ನು ಮುತ್ತುವ ಸಿದ್ಧತೆಯಲ್ಲಿ ತೊಡಗಿತು. ಮರಾಠರು ಬಿಜಾಪುರದ ಸುಲ್ತಾನನೊಂದಿಗೆ ಕಲೆತು ಮೊಗಲರ ದಾಳಿಯನ್ನು ಎದುರಿಸಿದರು. ಒಂದು ವರ್ಷ ಸತತ ಪ್ರಯತ್ನಪಟ್ಟರೂ ಬಿಜಾಪುರ ಮೊಗಲರ ವಶವಾಗುವ ಸೂಚನೆಗಳು ಕಂಡುಬರಲಿಲ್ಲ. ಸಿಕಂದರನಿಗೆ ಸಹಾಯ ಮಾಡಿದನೆಂಬ ಕಾರಣದಿಂದ ಗೋಲ್ಕೊಂಡದ ಸುಲ್ತಾನನ ಮೇಲೆ ಮೊಗಲರು ದಾಳಿ ನಡೆಸಿದರು. ಈ ಸಮಯದಲ್ಲಿ ಬಿಜಾಪುರ ದವರು ಸಹಾಯಕ್ಕೆ ಕಳುಹಿಸಿದ್ದ ಸೇನೆಯನ್ನು ಗೋಲ್ಕೊಂಡದ ಸುಲ್ತಾನ ವಾಪಸು ಕರೆಸಿಕೊಂಡ. ಇದು ಸಿಕಂದರನಿಗೆ ಅನನುಕೂಲವನ್ನುಂಟು ಮಾಡಿತು. ಈ ವೇಳೆಗೆ ಔರಂಗಜೇಬ್ ಸ್ವತಃ ಯುದ್ಧಭೂಮಿಗೆ ಬಂದು ಯುದ್ಧವನ್ನು ಮುಂದುವರಿಸಿದ. 1686 ಸೆಪ್ಟೆಂಬರ್ ಸುಮಾರಿಗೆ ಸಿಕಂದರ್ ತನ್ನೆಲ್ಲ ಸಾಮಥ್ರ್ಯವನ್ನೂ ಕಳೆದುಕೊಂಡ. ವಿಧಿಯಿಲ್ಲದೆ 1686 ಸೆಪ್ಟೆಂಬರ್ 9 ರಂದು ಔರಂಗಜೇಬನೊಡನೆ ಸಂಧಿಮಾಡಿಕೊಳ್ಳ ಬೇಕಾಯಿತು. 1686 ಸೆಪ್ಟೆಂಬರ್ 12ರಂದು ಸಿಕಂದರ್ ತನ್ನ ಆಡಳಿತ ಸಮಸ್ತವನ್ನು ಮೊಗಲರ ವಶಕ್ಕೊಪ್ಪಿಸಿಕೊಟ್ಟ. 200 ವರ್ಷಗಳ ಕಾಲ ಸ್ವತಂತ್ರವಾಗಿ ಆಳಿದ ಆದಿಲ್ ಶಾಹೀ ಸಂತತಿ ಅಲ್ಲಿಗೆ ಅಂತ್ಯಗೊಂಡಿತು.

	ಸಿಕಂದರ್ ಆದಿಲ್ ಷಾ ವೀರ ಯೋಧ. ಕೇವಲ ಹದಿನೆಂಟು ವರ್ಷದ ಯುವಕನಾಗಿದ್ದಾಗ ಹಿರಿಯನೂ ಯುದ್ಧಕುಶಲಿಯೂ ಸಾಮ್ರಾಟನೂ ಆದ ಔರಂಗಜೇಬನ ವಿರುದ್ಧ ದಿಟ್ಟತನದಿಂದ ಹೋರಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಇವನ ಪರಾಕ್ರಮವನ್ನು ಕಂಡು, ಇವನ ವ್ಯಕ್ತಿತ್ವಕ್ಕೆ ಮಾರುಹೋದ ಔರಂಗಜೇಬ್ ಇವನನ್ನು ಮೊಗಲರ ಸೇನೆ ಯಲ್ಲಿ ಖಾನನ ದರ್ಜೆಗೇರಿಸಿ ವಾರ್ಷಿಕ ಜೀವನ ಭತ್ಯವಾಗಿ ಒಂದು ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದ. ಮುಂದೆ ತನ್ನ ಸೇನೆಯೊಂದಿ ಗಿರಲು ಅಪ್ಪಣೆ ಮಾಡಿದ. ದೌಲತಾಬಾದಿನ ಬಂದೀಖಾನೆಯಲ್ಲಿ ಕೆಲವು ಕಾಲವಿಟ್ಟಿದ್ದು ಅನಂತರ ಸಿಕಂದರನನ್ನು ಔರಂಗಜೇಬನ ಶಿಬಿರದೊಂದಿಗೆ ಕರೆದೊಯ್ಯಲಾಯಿತು. 1700 ಏಪ್ರಿಲ್ 3 ರಂದು ಸತಾರದ ಸಮೀಪದಲ್ಲಿ ಸಿಕಂದರ್ ನಿಧನಹೊಂದಿದ. ಆಗ ಇವನಿಗೆ 32 ವರ್ಷ ವಯಸ್ಸು. ಸಿಕಂದರನ ಅಂತಿಮ ಕೋರಿಕೆಯಂತೆ ಇವನ ಪಾರ್ಥಿವ ಶರೀರವನ್ನು ಬಿಜಾಪುರದಲ್ಲಿದ್ದ ಈತನ ಆಧ್ಯಾತ್ಮಿಕ ಗುರು ಷೇಕ್‍ಫಹೀವುಲ್ಲಾನ ಸಮಾಧಿಯ ಸಮೀಪದಲ್ಲಿಯೇ ಸಮಾಧಿ ಮಾಡಲಾಯಿತು. 						
		(ಎಮ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ